Events







ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿದ್ದ “ಚಂದನವನ – ಅಂದು, ಇಂದು, ಮುಂದು” ವಿಚಾರ ಸಂಕಿರಣವು ಕನ್ನಡ ಚಿತ್ರರಂಗದ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ನಡೆಯಿತು. ಕನ್ನಡ ಸಿನಿರಂಗದ ಭೂತ, ವರ್ತಮಾನ ಮತ್ತು ಭವಿಷ್ಯದ ಕುರಿತು ಚರ್ಚೆ ನಡೆಸಿದ ಈ ಕಾರ್ಯಕ್ರಮವು ಚಿತ್ರರಂಗದ ವಲಯದಲ್ಲಿ ವಿಶೇಷ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ನಿರ್ಮಾಪಕರು, ವಿತರಕರು, ಪ್ರದರ್ಶಕರು, ಕಲಾವಿದರು, ನಿರ್ದೇಶಕರು, ಲೇಖಕರು, ತಂತ್ರಜ್ಞರು, ಮಾಧ್ಯಮ ಪ್ರತಿನಿಧಿಗಳು ಹಾಗೂ ಯುವ ಪ್ರತಿಭೆಗಳು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಚಿತ್ರರಂಗದ ಬೆಳವಣಿಗೆ, ಹೊಸ ಅವಕಾಶಗಳು ಮತ್ತು ಮುಂದಿನ ಪೀಳಿಗೆಯ ಸವಾಲುಗಳ ಕುರಿತು ನಡೆದ ಚರ್ಚೆಗಳು ಕಾರ್ಯಕ್ರಮಕ್ಕೆ ಇನ್ನಷ್ಟು ಮೌಲ್ಯ ತಂದವು.

ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಅತಿಥಿಗಳು ತಮ್ಮ ಅನುಭವಗಳು, ಸಲಹೆಗಳು ಮತ್ತು ಹೊಸ ಆಲೋಚನೆಗಳನ್ನು ಹಂಚಿಕೊಳ್ಳುವ ಮೂಲಕ ಯುವ ಚಿತ್ರಕರ್ತರಿಗೆ ಪ್ರೇರಣೆ ನೀಡಿದರು. ವಿಶೇಷವಾಗಿ ನಡೆದ ಪ್ರಶ್ನೋತ್ತರ ಅಧಿವೇಶನದಲ್ಲಿ ಯುವ ಪ್ರತಿಭೆಗಳು ಸಕ್ರಿಯವಾಗಿ ಪಾಲ್ಗೊಂಡು, ಚಿತ್ರರಂಗದ ವಿವಿಧ ಆಯಾಮಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದರು.

“ಅಂದು, ಇಂದು, ಮುಂದು” ಎಂಬ ಪರಿಕಲ್ಪನೆ ಕೇವಲ ಒಂದು ಕಾರ್ಯಕ್ರಮವಾಗಿರದೆ, ಕನ್ನಡ ಚಿತ್ರರಂಗದ ಪಯಣವನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಚಿಂತನಾ ಸಂಭ್ರಮವಾಗಿ ಮೂಡಿಬಂದಿತು. ಹಿರಿಯರ ಅನುಭವ ಮತ್ತು ಹೊಸ ತಲೆಮಾರಿನ ಕನಸುಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದ ಈ ಕಾರ್ಯಕ್ರಮ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಮೇಶ್ ಅರವಿಂದ್ ಹಾಗೂ ಕೆ. ವಿ. ಪ್ರಭಾಕರ್ ಅವರು ಕನ್ನಡ ಚಿತ್ರರಂಗದ ಭವಿಷ್ಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು, ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹದ ಮಾತುಗಳನ್ನು ಹೇಳಿದರು.

ಆರ್ಟಿಕಲ್ : ಮಾರ್ವೆಲ್ ಮನುರಥ್ 




ಬೆಂಗಳೂರು: ಗುಬ್ಬಿವಾಣಿ ಟ್ರಸ್ಟ್ ಆಯೋಜಿಸಿದ್ದ ‘ಅವಳ ಹೆಜ್ಜೆ’ ಮಹಿಳಾ ಕನ್ನಡ ಕಿರುಚಿತ್ರೋತ್ಸವ 2026 ರ ಎರಡನೇ ಆವೃತ್ತಿಯಲ್ಲಿ ನಿರ್ದೇಶಕಿ ಸುಪ್ರಿಯಾ ಶಂಕರ ನಿಪ್ಪಾಣಿ ಅವರ “ರೊಟ್ಟಿ” ಕಿರುಚಿತ್ರವು ಪ್ರತಿಷ್ಠಿತ ‘ಅವಳ ಹೆಜ್ಜೆ’ ಪ್ರಶಸ್ತಿ ಮತ್ತು ₹1 ಲಕ್ಷ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿದೆ.
ಕಾರ್ಯಕ್ರಮದ ಕುರಿತು ಮಾತನಾಡಿದ ಮಾಲವಿಕ ಗುಬ್ಬಿವಾಣಿ ಅವರು, “ಇದು ಕೇವಲ ಕಿರುಚಿತ್ರೋತ್ಸವವಲ್ಲ, ಮಹಿಳಾ ಧ್ವನಿಗಳಿಗೆ ವೇದಿಕೆ ಕಲ್ಪಿಸುವ ಒಂದು ಚಳುವಳಿ” ಎಂದು ಹೇಳಿದರು.

ಸಾಮಾಜಿಕ ಅಂಶಗಳನ್ನು ಒಳಗೊಂಡ ಕಥೆಗಳನ್ನು ತಮ್ಮದೇ ಶೈಲಿಯಲ್ಲಿ ತೆರೆಗೆ ತರುವ ಮೂಲಕ ಗುರುತಿಸಿಕೊಂಡಿರುವ ಸುಪ್ರಿಯಾ ಶಂಕರ ನಿಪ್ಪಾಣಿ ಅವರು, ಈ ಹಿಂದೆ ‘‘ಅಪ್ಪ ಬೆಳ್ಳಿ ಅಲ್ಲ’’ ಹಾಗೂ ‘‘ರಾಜಿ’’ ಕಿರುಚಿತ್ರಗಳ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದರು. ವಿವಿಧ ಭಾಷಾ ಚಿತ್ರಗಳಲ್ಲಿ ಸಹ-ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿರುವ ಅವರು, ‘‘ಚುರುಮುರಿಯಾ’’ ಚಿತ್ರದ ಮೂಲಕವೂ ತಮ್ಮ ವಿಭಿನ್ನ ಸೃಜನಾತ್ಮಕತೆಯನ್ನು ಸಾಬೀತುಪಡಿಸಿದ್ದಾರೆ. ಚಿತ್ರೋತ್ಸವದಲ್ಲಿ ವಿವಿಧ ವಿಭಾಗಗಳಲ್ಲೂ ನಾಲ್ಕು ಕಿರುಚಿತ್ರಗಳಿಗೆ ತಲಾ ₹10,000 ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಖ್ಯಾತ ಮಾಧ್ಯಮ ವೃತ್ತಿಪರರು ಹಾಗೂ ಕಾಸ್ಟಿಂಗ್ ಡೈರೆಕ್ಟರ್ ಆಗಿರುವ ಸುನಯನಾ ಸುರೇಶ್ ಅವರ ಚೊಚ್ಚಲ ನಿರ್ದೇಶನದ “ಮೌನ ರಾಗ” ಚಿತ್ರಕ್ಕೆ ‘‘ಗೂಡಿನಿಂದ ಗಗನದಡೆಗೆ’’ ವಿಭಾಗದ ಪ್ರಶಸ್ತಿ ಲಭಿಸಿತು. ಹಾಗೆಯೇ ಶ್ರೇಯಾ ಸುನಿಲ್ ಅವರ “ಆ ಮಾಡಿ” ಚಿತ್ರವು ‘ಹಾಸ್ಯ ಮತ್ತು ವಿಡಂಬನೆ’ ವಿಭಾಗದಲ್ಲಿ ಮೆಚ್ಚುಗೆ ಪಡೆದುಕೊಂಡಿತು.

‘ಸಾಮಾಜಿಕ ಬದಲಾವಣೆಯ ಕಥಾವಸ್ತು’ ವಿಭಾಗದಲ್ಲಿ ವನು ಪಾಟೀಲ್ ಅವರ “ನಿತ್ಯ” ಚಿತ್ರ ಹಾಗೂ ಮಾನವ-ವನ್ಯಜೀವಿ ಸಹಬಾಳ್ವೆಯನ್ನು ಆಧರಿಸಿದ ಸೌರಭ್ ರಾವ್ ಅವರ “ಹುಲಿಯಪ್ಪ” ಸಾಕ್ಷ್ಯಚಿತ್ರ ಪ್ರಶಸ್ತಿ ಪಡೆದವು. “ಹುಲಿಯಪ್ಪ” ಸಾಕ್ಷ್ಯಚಿತ್ರದ ಪ್ರಶಸ್ತಿಗೆ ಏವಿಯನ್ ಮತ್ತು ರೆಪ್ಟೈಲ್ ಪುನರ್ವಸತಿ ಕೇಂದ್ರ ಸಂಸ್ಥೆ ಪ್ರಾಯೋಜಕತ್ವ ನೀಡಿತ್ತು.

ಚಿತ್ರ ಪ್ರದರ್ಶನದ ಬಳಿಕ ನಡೆದ “ಸಿನೆಮಾದಲ್ಲಿ ಅವಳ ಹೆಜ್ಜೆ ‘ಅ - ಅಃ’ ವರೆಗೆ” ಚರ್ಚಾಗೋಷ್ಠಿಯಲ್ಲಿ ನಟಿ. ನೀತು ಶೆಟ್ಟಿ, ಗ್ರೀಷ್ಮಾ ಶ್ರೀಧರ್, ನಿರ್ದೇಶಕಿ ಸಂಜೋತಾ ಭಂಡಾರಿ ಹಾಗೂ ಮಾರ್ಕೆಟಿಂಗ್ ಸ್ಟ್ರಾಟಜಿಸ್ಟ್ ಸಂಗೀತಾ ನಂಜುಂಡಸ್ವಾಮಿ ಭಾಗವಹಿಸಿದರು. ಮಹಿಳೆಯರ ಸಿನಿಪಯಣ, ಸವಾಲುಗಳು ಹಾಗೂ ಮುಂದಿನ ಅವಕಾಶಗಳ ಕುರಿತು ನಡೆದ ಚರ್ಚೆಯಲ್ಲಿ ತಾಳ್ಮೆ, ಶಿಸ್ತು ಮತ್ತು ಒಗ್ಗಟ್ಟು ಯಶಸ್ಸಿನ ಮುಖ್ಯ ಅಂಶಗಳು ಎಂದು ಅಭಿಪ್ರಾಯಪಟ್ಟರು.

ಆರ್ಟಿಕಲ್ : ಮಾರ್ವೆಲ್ ಮನುರಥ್ 



Comments

Popular